ಏಕಾಂಕ ನಾಟಕ: ಒಂದೇ ಅಂಕವನ್ನುಳ್ಳ ಒಂದು ಬಗೆಯ ನಾಟಕ. ಮೊದ ಮೊದಲಿಗೆ ಹಗುರ ನಾಟಕವಾಗಿ (ವಾದವಿಲ್) ಕಾಣಿಸಿಕೊಂಡು ಅನಂತರ ಕಿರುನಾಟಕವಾಗಿ (ದಿ ಕರ್ಟನ್ ರೈಸರ್) ವಿಕಾಸಹೊಂದಿ ಈ ನಾಟಕಪ್ರಕಾರ ತನ್ನದೇ ಆದ ಒಂದು ವಿಶಿಷ್ಟರೂಪವನ್ನು ಪಡೆದು ಇಂಗ್ಲಿಷ್ ಮತ್ತು ಯುರೋಪಿಯನ್ ಭಾಷೆಗಳಲ್ಲಿ ಗಣ್ಯಸ್ಥಾನಗಳಿಸಿತು.

ಇಂಗ್ಲೆಂಡಿನ ನಾಟಕಮಂದಿರಗಳಲ್ಲಿ ಮುಖ್ಯನಾಟಕ ಪ್ರಾರಂಭವಾಗುವುದಕ್ಕೆ ಅರ್ಧ ಅಥವಾ ಮುಕ್ಕಾಲು ಗಂಟೆ ಮುಂಚೆ ಪ್ರಾಸ್ತಾವಿಕವಾಗಿ ಯಾವುದಾದರೊಂದು ಪುಟ್ಟ ನಾಟಕವನ್ನೊ ಕೆಲವು ಪುಟ್ಟ ದೃಶ್ಯಾವಳಿಗಳನ್ನೋ ಅಭಿನಯಿಸುತ್ತಿದ್ದರು. ಇವನ್ನು ಕಿರುನಾಟಕಗಳೆಂದು ಕರೆದರು. ಪ್ರೇಕ್ಷಕರ ಗಮನವೆಲ್ಲವೂ ಮುಖ್ಯನಾಟಕದ ಕಡೆ ಕೇಂದ್ರೀಕೃತವಾಗುತ್ತಿದ್ದುದರಿಂದ ಪ್ರಾಸ್ತಾವಿಕವಾದ ಈ ಪುಟ್ಟ ದೃಶ್ಯಗಳು ಅಥವಾ ಕಿರುನಾಟಕಗಳು ತಮ್ಮದೇ ಆದ ವಿಶಿಷ್ಟಸ್ಥಾನವನ್ನು ಪಡೆಯಲು ಹಲವು ಕಾಲ ಹಿಡಿಯಿತು. ಇಂಗ್ಲೆಂಡ್ ಮತ್ತು ಐರ್ಲೆಂಡ್ಗಳಲ್ಲಿ 
ಪ್ರಾರಂಭವಾದ ಸಣ್ಣ ನಾಟಕಮಂದಿರದ ಚಳವಳಿಯಿಂದ ಏಕಾಂಕ ನಾಟಕಗಳು ಬಹು ಬೇಗ ಜನಪ್ರಿಯವಾಗಿ ದೊಡ್ಡ ನಾಟಕಗಳ ಬೆಳೆವಣಿಗೆಗೆ ಸಹಾಯಕವಾದವು.

ಏಕಾಂಕ ನಾಟಕವೆಂದರೆ ಕೇವಲ ಸಣ್ಣ ನಾಟಕವೆಂದಲ್ಲ, ಏಕತೆಯಲ್ಲಿ (ನೋಡಿ- ಏಕತೆಗಳು), ಸಂಕ್ಷಿಪ್ತತೆಯಲ್ಲಿ, ಅದು ದೊಡ್ಡ ನಾಟಕಕ್ಕಿಂತ ಬೇರೆಯಾದುದು. ತೀವ್ರಗತಿಯ ನಿರೂಪಣೆ, ಸಂಕ್ಷಿಪ್ತತೆ, ಸಮತೂಕವಾದ ಪರಿಣಾಮ ಇವು ಏಕಾಂಕ ನಾಟಕದ ಮುಖ್ಯ ಗುಣಗಳು. 3-4 ಗಂಟೆಗಳಲ್ಲಿ ನಡೆಯುವ ದೊಡ್ಡ ನಾಟಕದಲ್ಲೂ ಇವು ಬೇಕು. ಆದರೆ ಏಕಾಂಕ ನಾಟಕದಲ್ಲಿ ಇವುಗಳ ಆವಶ್ಯಕತೆ ಹೆಚ್ಚು. ಏಕಾಂಕ ನಾಟಕದಲ್ಲಿನ ಪ್ರತಿಯೊಂದು ಸನ್ನಿವೇಶ, ಪಾತ್ರಗಳ ಅಭಿನಯ ಮತ್ತು ಮಾತುಗಳು ಶಕ್ತಿಯುತವಾಗಿರಬೇಕು; ನವಿರಾಗಿರಬೇಕು; ಗಂಭೀರವಾಗಿ ಅಥವಾ ಲಕ್ಷಣವಾಗಿ ಅಥವಾ ಕಾವ್ಯಮಯವಾಗಿ ಬೇಕಾದ ಪರಿಣಾಮಕ್ಕನುಸಾರವಾಗಿ ಅವು ಅಭಿವ್ಯಕ್ತ ಗೊಳ್ಳಬೇಕು. ಪ್ರೇಕ್ಷಕರ ಚಿತ್ತವನ್ನು ಅವು ಮೊದಲ ದೃಶ್ಯದಿಂದ ಕೊನೆಯವರೆಗೂ ಆವರಿಸಿಕೊಳ್ಳಬೇಕು. ಇದೇ ಉತ್ತಮ ನಾಟಕದ ಗುರಿ ಮತ್ತು ನೀತಿ. ಇಂಥ ಏಕತೆಯನ್ನು ಸಾಧಿಸಬೇಕಾದರೆ ನಾಟಕದ ಭಾವದಲ್ಲಿ ವಸ್ತುವಿನಲ್ಲಿ ಏಕತೆಯಿರಬೇಕು. ಹಲವಾರು ಘಟನೆಗಳು ಏಕಗತಿಯಲ್ಲಿ ಮುಂದುವರಿದು ಪರಿಣಾಮಕಾರಿಯಾದ ಒಂದು ಘಟ್ಟದಲ್ಲಿ ಪರ್ಯವಸಾನ ಹೊಂದಬೇಕು.

ಏಕಾಂಕ ನಾಟಕದಲ್ಲಿ ಸಾಮಾನ್ಯವಾಗಿ ಬರುವ ಪಾತ್ರಗಳ ಸಂಖ್ಯೆ ಅತಿ ಕಡಿಮೆ. ನಾಟಕದ ಕಥೆ ಒಂದೆರಡು ಪಾತ್ರಗಳ ಸುತ್ತಲೂ ತಿರುಗುತ್ತದೆ. ಆದರೆ ಪಾತ್ರಗಳ ಸಂಖ್ಯೆ ಮುಖ್ಯವಲ್ಲ. ಅವು ಒಂದಕ್ಕೊಂದು ಹೊಂದಿಕೊಂಡು ಭಾವೈಕ್ಯವನ್ನು ಸಾಧಿಸಬೇಕು, ಅಂತಿಮ ಪರಿಣಾಮಕ್ಕೆ ಪುಷ್ಟಿ ಕೊಡಬೇಕು. ಉದಾಹರಣೆಗೆ ದಿ ಲಿಟಲ್ ಸ್ಟೋನ್ ಹೌಸ್ ಎಂಬ ತನ್ನ ಏಕಾಂಕ ನಾಟಕದಲ್ಲಿ ಜಾರ್ಜ್ ಕಾಲ್ಡೆರಾನ್ ಹಲವಾರು ಪುಟ್ಟ ಪುಟ್ಟ ಪಾತ್ರಗಳನ್ನು ಸುಂದರವಾಗಿ ಸೃಷ್ಟಿಸಿ ಅವುಗಳ ಮೂಲಕ ರಸಪುಷ್ಟಿಯನ್ನುಂಟು ಮಾಡುತ್ತಾನೆ. ಒಟ್ಟಿನಲ್ಲಿ ಹೇಳುವುದಾದರೆ ದೊಡ್ಡ ನಾಟಕ ವಿಸ್ತಾರವಾಗಿ ಸಾಧಿಸುವ ರಸಪುಷ್ಟಿಯನ್ನು ಏಕಾಂಕ ನಾಟಕ ಸೂಚ್ಯವಾಗಿ, ಸೂಕ್ಷ್ಮವಾಗಿ ಸಾಧಿಸುತ್ತದೆ. ಇಂಥ ಸೂಕ್ಷ್ಮವಾದ ಕಾವ್ಯಕುಶಲತೆ ಹಾಗೂ ರಸಸಿದ್ಧಿಯನ್ನು ನಾವು ಉತ್ತಮ ಏಕಾಂಕ ನಾಟಕಗಳಾದ ದಿ ರೈಡರ್ಸ್‌ ಟು ದಿ ಸೀ, ಎ 

ನೈಟ್ ಎಟ್ ಎನ್ ಇನ್ ಮುಂತಾದ ಕಲಾ ಕೃತಿಗಳಲ್ಲಿ ಕಾಣಬಹುದು.
ಏಕಾಂಕ ನಾಟಕಗಳನ್ನು ರಚಿಸಿದವರಲ್ಲಿ ಸಿಂಜ್, ಲೇಡಿ ಗ್ರೆಗರಿ, ಲಾರ್ಡ್ ಡನ್ ಸನಿ, ಸ್ಲೇಡನ್ ಸ್ಮಿಥ್, ನೋಯಲ್ ಕವರ್ಡ್ ಮುಂತಾದವರು ಮುಖ್ಯರು.
ಏಕಾಂಕ ನಾಟಕಗಳನ್ನು ರೇಡಿಯೊ ಮತ್ತು ಟೆಲಿವಿಷನ್ಗಳಿಗೆ ಅಳವಡಿಸಿ ಉತ್ತಮ ಪ್ರಯೋಗಗಳನ್ನು ನಡೆಸುತ್ತಿದ್ದಾರೆ. ಚಿರಪರಿಚಿತವಾದ ಉತ್ತಮ ನಾಟಕವೊಂದರ ಸೂಚ್ಯ ಸನ್ನಿವೇಶವೊಂದನ್ನು ಆರಿಸಿಕೊಂಡು ಅದಕ್ಕೆ ತಮ್ಮದೇ ಆದ ಕಾಲ್ಪನಿಕ ಪಾತ್ರ ಮತ್ತು ಘಟನೆಗಳನ್ನು ಸೇರಿಸಿ ಉತ್ಕೃಷ್ಟವಾದ ಏಕಾಂಕ ನಾಟಕಗಳನ್ನು ರಚಿಸಿದ್ದಾರೆ. ಹೀಗೆ ತನ್ನದೇ ಆದ ವಿಶಿಷ್ಟ ಜಾಡನ್ನು ಹಿಡಿದು ಏಕಾಂಕ ನಾಟಕ ಸಾಗುತ್ತಿದೆ.

ಕನ್ನಡದಲ್ಲಿ ಕೈಲಾಸಂ, ಕುವೆಂಪು, ಬೇಂದ್ರೆ, ಕೈವಾರ ರಾಜಾರಾವ್, ಶ್ರೀರಂಗ, ಪರ್ವತವಾಣಿ, ಕ್ಷೀರಸಾಗರ ಮುಂತಾದವರು ಸೊಗಸಾದ ಏಕಾಂಕ ನಾಟಕಗಳನ್ನು ರಚಿಸಿದ್ದಾರೆ. ಅವುಗಳಲ್ಲಿ ಅನೇಕ ಕೃತಿಗಳು ರಂಗಮಂದಿರಗಳಲ್ಲಿ ಅಭಿನಯಿಸಲ್ಪಟ್ಟು ಬಹು ಜನಪ್ರಿಯವಾಗಿವೆ (ನೋಡಿ- ಉಪನಾಟಕಗಳು).            (ಎಚ್.ಕೆ.ಆರ್.)

ಏಕಾಂಕ ನಾಟಕವು ಭಾರತೀಯ ರಂಗಭೂಮಿಗೆ ಅಪರಿಚಿತವಲ್ಲ. ಭಾಸನು ಏಕಾಂಕ ನಾಟಕಗಳನ್ನು ರಚಿಸಿದ. 20ನೆಯ ಶತಮಾನದಲ್ಲಿ ಪಾಶ್ಚಾತ್ಯ ರಂಗಭೂಮಿಯಿಂದ ಬಂದ ಏಕಾಂಕ ನಾಟಕವು ಕನ್ನಡ ರಂಗಭೂಮಿಯಲ್ಲಿಯೂ ಜನಪ್ರಿಯವಾಯಿತು ಶ್ರಿರಂಗರು ಐವತ್ತಕ್ಕಿಂತ ಹೆಚ್ಚು ಏಕಾಂಕ ನಾಟಕಗಳನ್ನು ರಚಿಸಿದ್ದಾರೆ. ಅವರು ಪೌರಾಣಿಕ ಕಥಾವಸ್ತುಗಳನ್ನು ಬಹು ಪರಿಣಾಮಕಾರಿಯಾಗಿ ಬಳಸಿಕೊಂಡರು. ಅಹಲ್ಯೋದ್ಧಾರ ಅಶ್ವಮೇಧ, ನಿರುತ್ತರ ಕುಮಾರ ಮೊದಲಾದ ನಾಟಕಗಳು ನಿದರ್ಶನಗಳು. ಸೊಗಸಾದ ಏಕಾಂಕ ನಾಟಕಗಳನ್ನು ಬರೆದ ಮತ್ತೊಬ್ಬ ಪ್ರತಿಭಾವಂತರು ಪರ್ವತವಾಣಿ. ಬಹುಮಟ್ಟಿಗೆ ಏಕಾಂಕ ನಾಟಕಗಳು ಹೆಚ್ಚು ಕಾಲವನ್ನು ತೆಗೆದುಕೊಳ್ಳುವುದಿಲ್ಲ, ಹೆಚ್ಚು ರಂಗಸಜ್ಜಿಕೆಯ ಅಗತ್ಯವಿಲ್ಲ ಮತ್ತು ಹೆಚ್ಚು ಪಾತ್ರಗಳಿರುವುದಿಲ್ಲ ಎನ್ನುವ ಕಾರಣಗಳಿಗಾಗಿ ಕನ್ನಡ ನಾಡಿನಲ್ಲಿ ವ್ಯಾಪಕವಾಗಿ ಪ್ರದರ್ಶಿತವಾದವು. ಸಣ್ಣ ಊರುಗಳಲ್ಲಿ ಕೆಲವರು ಹವ್ಯಾಸಿ ನಟರು ಇಂಥ ನಾಟಕಗಳನ್ನು ಪ್ರದರ್ಶಿಸುವುದು ಸಾಧ್ಯವಾದುದರಿಂದ, ಹೆಚ್ಚಿನ ಚಲನಚಿತ್ರಗಳ ಜನಪ್ರಿಯತೆಯ ಕಾಲದಲ್ಲಿಯೂ ಇವು ರಂಗಭೂಮಿಯನ್ನು ಜೀವಂತವಾಗಿ ಉಳಿಸಿದವು.	      
(ಎಲ್.ಎಸ್.ಎಸ್)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ